ಕಾಲೇಜಿನಿಂದ ವಾಪಸ್ಸಾಗುತ್ತಿದ್ದ ವೇಳೆ ಟಿಪ್ಪರ್ ಲಾರಿ ಹರಿದು 21 ವರ್ಷದ MBBS ವಿದ್ಯಾರ್ಥಿನಿ ಸಾವು

Share

ಬೆಂಗಳೂರು: ನಗರದಲ್ಲಿ ಮತ್ತೊಂದು ದುರ್ಘಟನೆಯ ಪ್ರಕರಣ ಬೆಳಕಿಗೆ ಬಂದಿದೆ. ಕಾಲೇಜು ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ 21 ವರ್ಷದ MBBS ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ಮೈಸೂರು ರಸ್ತೆಯ ಆರ್.ಆರ್. ವೈದ್ಯಕೀಯ ಕಾಲೇಜು ಸಮೀಪ ನಡೆದಿದೆ.ಮೃತರನ್ನು ಕೃತಿಕಾ (21) ಎಂದು ಗುರುತಿಸಲಾಗಿದೆ. ಅವರು ಆರ್.ಆರ್. ವೈದ್ಯಕೀಯ ಕಾಲೇಜಿನಲ್ಲಿ ನಾಲ್ಕನೇ ವರ್ಷದ MBBS ವಿದ್ಯಾರ್ಥಿನಿಯಾಗಿದ್ದರು ಎಂದು ತಿಳಿದುಬಂದಿದೆ

ಮಾಹಿತಿಯ ಪ್ರಕಾರ, ಕೃತಿಕಾ ತಮ್ಮ ಸ್ನೇಹಿತೆ ಹಂಸ ಜೊತೆ ಸ್ಕೂಟರ್‌ನಲ್ಲಿ ಕಾಲೇಜಿನಿಂದ ಹೊರಟು ಮೈಸೂರು ರಸ್ತೆಯ ಕಡೆಗೆ ತೆರಳುತ್ತಿದ್ದರು. ಈ ವೇಳೆ ಮೈಸೂರು ದಿಕ್ಕಿಗೆ ಸಾಗುತ್ತಿದ್ದ ಟಿಪ್ಪರ್ ಲಾರಿ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ . ಡಿಕ್ಕಿಯ ರಭಸಕ್ಕೆ ಸ್ಕೂಟರ್ ಚಲಾಯಿಸುತ್ತಿದ್ದ ಹಂಸ ರಸ್ತೆ ಎಡಭಾಗಕ್ಕೆ ಬಿದ್ದರೆ, ಹಿಂಬದಿ ಕುಳಿತಿದ್ದ ಕೃತಿಕಾ ಬಲಭಾಗಕ್ಕೆ ಬಿದ್ದಿದ್ದಾರೆ. ದುರ್ಭಾಗ್ಯವಶಾತ್ ಟಿಪ್ಪರ್ ಲಾರಿಯ ಚಕ್ರ ಕೃತಿಕಾ ಅವರ ಮೇಲೆ ಹರಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೊಬ್ಬ ವಿದ್ಯಾರ್ಥಿನಿಗೆ ಗಾಯ

ಈ ಅಪಘಾತದಲ್ಲಿ ಸ್ಕೂಟರ್ ಚಾಲನೆ ಮಾಡುತ್ತಿದ್ದ ಹಂಸ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಸಮೀಪದ ಆರ್.ಆರ್. ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಘಟನೆ ಬಗ್ಗೆ ಮಾಹಿತಿ ದೊರಕುತ್ತಿದ್ದಂತೆ ಕೆಂಗೇರಿ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡು ಟಿಪ್ಪರ್ ಲಾರಿ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ