ಬೆಂಗಳೂರಿನಲ್ಲಿ 19 ಯುವತಿಯರಿಗೆ ಡ್ರಗ್ಸ್ ನೀಡಿ ಲೈಂಗಿಕ ದೌರ್ಜನ್ಯ: ಅಮೃತಹಳ್ಳಿ ಪೊಲೀಸರು ನಿಖಿಲ್ ಮತ್ತು ಡಿಕ್ಸನ್ ಬಂಧನ

Share

ಬೆಂಗಳೂರು ನಗರದಲ್ಲಿ ಕಾಲೇಜು ವಿದ್ಯಾರ್ಥಿನಿಯರನ್ನು ಟಾರ್ಗೆಟ್ ಮಾಡಿಕೊಂಡು ಡ್ರಗ್ಸ್ ನೀಡಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಇಬ್ಬರು ಆರೋಪಿಗಳನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಸಕಲೇಶಪುರ ಮೂಲದ ನಿಖಿಲ್ ಹಾಗೂ ಪಶ್ಚಿಮ ಬಂಗಾಳ ಮೂಲದ ಡಿಕ್ಸನ್ ಎಂದು ಗುರುತಿಸಲಾಗಿದೆ.

ಪೊಲೀಸರ ತನಿಖೆ ಪ್ರಕಾರ, ಆರೋಪಿಗಳು ಇನ್‌ಸ್ಟಾಗ್ರಾಮ್ ಮೂಲಕ ವಿವಿಧ ಕಾಲೇಜುಗಳ ಯುವತಿಯರೊಂದಿಗೆ ಸ್ನೇಹ ಬೆಳೆಸಿ, ಫೋಟೋಶೂಟ್, ಮಾಡೆಲಿಂಗ್ ಅಥವಾ ಪಾರ್ಟಿ ನೆಪದಲ್ಲಿ ಆಹ್ವಾನಿಸುತ್ತಿದ್ದರು. ಆರಂಭದಲ್ಲಿ ಪಬ್‌ಗಳಲ್ಲಿ ಸಭ್ಯರಂತೆ ವರ್ತಿಸಿ ವಿಶ್ವಾಸ ಗಳಿಸುತ್ತಿದ್ದ ಅವರು, ಬಳಿಕ ಪಾರ್ಟಿ ವೆಚ್ಚ ಭರಿಸುವ ನೆಪದಲ್ಲಿ ಯುವತಿಯರಿಗೆ ಡ್ರಗ್ಸ್ ನೀಡಿ ಅರೆಪ್ರಜ್ಞಾವಸ್ಥೆಗೆ ತಳ್ಳುತ್ತಿದ್ದರೆಂಬ ಆರೋಪ ಕೇಳಿಬಂದಿದೆ. ಈ ಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರೆಂದು ತಿಳಿದುಬಂದಿದೆ.

ಪ್ರಕರಣದಲ್ಲಿ 19 ಯುವತಿಯರು ದೌರ್ಜನ್ಯಕ್ಕೊಳಗಾಗಿರುವ ಶಂಕೆ ವ್ಯಕ್ತವಾಗಿದೆ. ಕೆಲವು ಯುವತಿಯರು ಒತ್ತಡ ಹಾಗೂ ಮುಜುಗರದ ಕಾರಣ ದೂರು ನೀಡಲು ಹಿಂದೇಟು ಹಾಕಿದ್ದರೆಂದು ಹೇಳಲಾಗಿದೆ. ಘಟನೆ ನಡೆದಿತ್ತೆಂದು ಶಂಕಿಸಲಾದ ವಿಲ್ಲಾದ ಸಿಸಿಟಿವಿ ದೃಶ್ಯಗಳು ಹಾಗೂ ಆರೋಪಿಗಳ ಮೊಬೈಲ್‌ಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

ಒಬ್ಬ ಸಂತ್ರಸ್ತ ಯುವತಿಯೊಂದಿಗೆ ಪ್ರೀತಿಯ ನೆಪದಲ್ಲಿ ಸಂಪರ್ಕ ಬೆಳೆಸಿದ ಡಿಕ್ಸನ್, ಆಕೆಯನ್ನು ಪಾರ್ಟಿಗೆ ಕರೆದುಕೊಂಡು ಹೋಗಿ ಸಹಕರಿಸುವಂತೆ ಒತ್ತಾಯಿಸಿದ್ದಾನೆ. ನಿರಾಕರಿಸಿದ ಹಿನ್ನೆಲೆಯಲ್ಲಿ ಡ್ರಗ್ಸ್ ನೀಡಿ ಬಲವಂತವಾಗಿ ದೌರ್ಜನ್ಯ ಎಸಗಿದ ಆರೋಪವೂ ಹೊರಬಂದಿದೆ.

ಇದಕ್ಕೂ ಮೊದಲು ಸಂತ್ರಸ್ತೆಯ ವಿರುದ್ಧವೇ ಬ್ಲಾಕ್‌ಮೇಲ್ ಆರೋಪ ಮಾಡುತ್ತ ನಿಖಿಲ್ ಮಲ್ಲೇಶ್ವರ ಠಾಣೆಗೆ ದೂರು ನೀಡಲು ಮುಂದಾಗಿದ್ದ ಎನ್ನಲಾಗಿದೆ. ಆದರೆ ಯುವತಿ ನೀಡಿದ ದೂರಿನ ಆಧಾರದ ಮೇಲೆ ಅಮೃತಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಇಬ್ಬರನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಹೆಚ್ಚಿನ ಮಾಹಿತಿಯನ್ನು ತನಿಖೆ ಪೂರ್ಣಗೊಂಡ ಬಳಿಕ ಪ್ರಕಟಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ