ಮಂಗಳೂರು ನಗರದ ಜೆಪ್ಪಿನಮೊಗರು ಪ್ರದೇಶದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಪೆರ್ಮನ್ನೂರು ಗ್ರಾಮದ ಪಿಲಾರು ಹೊಸಗದ್ದೆ ನಿವಾಸಿ ಫರ್ವೇಝ್ ಯಾನೆ ದಾವೂದ್ ಫರ್ವೇಝ್ (40) ಹಾಗೂ ನಝರತ್ ಅಲಿ (37) ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ ವೇಳೆ, ಆರೋಪಿಗಳಿಂದ ಸುಮಾರು ₹46.5 ಲಕ್ಷ ಮೌಲ್ಯದ 465.8 ಗ್ರಾಂ ಎಂಡಿಎಂಎ (MDMA) ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸರ ತನಿಖೆಯ ಪ್ರಕಾರ, ಪ್ರಮುಖ ಆರೋಪಿ ಫರ್ವೇಝ್ ಹೊರ ಜಿಲ್ಲೆಗಳಿಂದ ಮಾದಕ ವಸ್ತುಗಳನ್ನು ತರಿಸಿ ಮಂಗಳೂರು ನಗರದ ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಕರನ್ನು ಗುರಿಯಾಗಿಸಿಕೊಂಡು ಮಾರಾಟ ಮಾಡುತ್ತಿದ್ದನು. ಈತನ ವಿರುದ್ಧ ಪಾಂಡೇಶ್ವರ, ಬಂದರು, ವಾಮಂಜೂರು, ಬೆಂಗಳೂರಿನ ಅಮೃತಹಳ್ಳಿ ಹಾಗೂ ಉಡುಪಿ ಸೆನ್ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿವೆ.
ಇನ್ನೊಬ್ಬ ಆರೋಪಿ ನಝರತ್ ಅಲಿ ಈ ಅಕ್ರಮ ವ್ಯವಹಾರಕ್ಕೆ ಸಹಕರಿಸುತ್ತಿದ್ದನೆಂದು ತಿಳಿದುಬಂದಿದೆ. ಕಂಕನಾಡಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಮುಂದುವರೆಸಿದ್ದಾರೆ..